Post has attachment

ನಮ್ಮ ಕಂಪೆನಿಯಲ್ಲಿ ಅನೇಕ ಸಂಘ ಸಂಸ್ಥೆಗಳಿವೆ. ಈ ಸಂಘ ಸಂಸ್ಥೆಗಳ ಸದಸ್ಯರು, ಅವುಗಳ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಾರೆ. ೧೯೯೦ ರ ದಶಕದ ಮಧ್ಯಭಾಗ. ಇಂತಹ ಸಂಘ ಸಂಸ್ಥೆಯೊಂದರ, ಚುನಾವಣೆ ನಡೆಸಲು ನಾನು ಚುನಾವಣಾಧಿಕಾರಿ (Returning Officer) ಆಗಿ ನೇಮಕಗೊಂಡಿದ್ದೆ. ಚುನಾವಣೆಯಲ್ಲಿ, ಮತದಾನ ಪತ್ರಗಳ (ballot paper) ಬದಲಾಗಿ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸುವಂತೆ ಯಾರೋ ಸಲಹೆಯಿತ್ತರು. ಭಾರತೀಯ ವಿದ್ಯುನ್ಮಾನ ಸಂಸ್ಥೆಯವರು (BEL) ಈ ಮತದಾನ ಯಂತ್ರಗಳನ್ನು ತಯಾರಿಸುತ್ತಿದ್ದರು ಮತ್ತು ಈ ಯಂತ್ರಗಳನ್ನು ನಮ್ಮಂಥಹ ಸಂಘ ಸಂಸ್ಥೆಗಳ ಚುನಾವಣೆಗೆ ಪುಕ್ಕಟೆಯಾಗಿ ಎರವಲು ಕೊಡುತ್ತಿದ್ದರು. ಮತದಾನ ಯಂತ್ರಗಳನ್ನು ನಮ್ಮ ಚುನಾವಣೆಗೆ ಕೊಡುವಂತೆ ಬಿ ಇ ಎಲ್ ಸಂಸ್ಥೆಯನ್ನು ವಿನಂತಿಸಿಕೊಂಡಾಗ, ಅವರು ತುಂಬಾ ಸಂತೋಷದಿಂದಲೇ ಒಪ್ಪಿಕೊಂಡರು. ಈ ರೀತಿಯಾಗಿ, ಮತದಾನ ಯಂತ್ರಗಳ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಅವರ ಉದ್ದೇಶವೂ ಸಹ ಈಡೇರುತಿತ್ತು.

ನಮ್ಮ ಕಂಪೆನಿಯಲ್ಲಿ ಇದೇ ಮೊದಲ ಸಲ ಮತದಾನ ಯಂತ್ರಗಳನ್ನು ಉಪಯೋಗಿಸುತ್ತಿದ್ದುದ್ದರಿಂದ, ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಗಳಿಗೆ ಮತ್ತು ಇತರ ಕೆಲವು ನೌಕರರಿಗೆ ಚುನಾವಣೆಗೆ ಮುಂಚಿತವಾಗಿಯೇ ಮತದಾನ ಯಂತ್ರದ ಡೆಮೋ ಸಹಾ ಏರ್ಪಡಿಸಿದ್ದೆವು. ಬಿ ಇ ಎಲ್ ನ ಮ್ಯಾನೇಜರ್ ಒಬ್ಬರು (ಈಗ ಅವರ ಹೆಸರು ನೆನಪಿಲ್ಲ) ಮತದಾನ ಯಂತ್ರಗಳನ್ನು ತಂದು ಅದರ ಕಾರ್ಯ ಕ್ಷಮತೆಯ ಬಗೆಗೆ ಎಲ್ಲರಿಗೂ ಪರಿಚಯಿಸಿದರು. ಎಲ್ಲಾ ಅಭ್ಯರ್ಥಿಗಳೂ ಬಹಳ ಆಸಕ್ತಿಯಿಂದ ವೀಕ್ಷಿಸಿದರು ಮತ್ತು ತಮಗಿದ್ದ ಅನುಮಾನಗಳನ್ನು ಬಗೆಹರಿಸಿಕೊಂಡರು. ಕೆಲವರಿಗೆ, ಈ ಯಂತ್ರಗಳು ಪಕ್ಷಪಾತವಿಲ್ಲದೆ (un-biased) ಕೆಲಸ ಮಾಡುವುದರ ಬಗೆಗೆ ಅನುಮಾನವಿತ್ತು. ಈ ಯಂತ್ರಗಳ ಸಹಾಯದಿಂದ ತಮಗೆ ಬೇಕಾದ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನೋ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಭಾವಿಸಿದ್ದರು. ಡೆಮೋ ಆದ ಮೇಲೆ, ನನ್ನ ಬಳಿ ನಟರಾಜನ್ ಎಂಬ ಅಭ್ಯರ್ಥಿಯೊಬ್ಬರು ಬಂದು,
“ಏನ್ಸಾರ್ ಇದೆಲ್ಲಾ?” ಎಂದು ಕೇಳಿದರು.

" ನೋಡಿ, ಬ್ಯಾಲೆಟ್ ಪೇಪರ್ ಗೆ ಬದಲಾಗಿ, ಆ ಯಂತ್ರವನ್ನು ಉಪಯೋಗಿಸುತ್ತಿದ್ದೇವೆ, ಅಷ್ಟೇ"
"ಇದೆಲ್ಲಾ ಮೋಸ ಸಾರ್. ನಿಮಗೆ ಬೇಕಾದವರನ್ನು ಗೆಲ್ಲಿಸಲಿಕ್ಕೆ ಈ ಮಷೀನ್ ಉಪಯೋಗಿಸುತ್ತೀದ್ದೀರಿ!"
“ಇದರಲ್ಲಿ ಮೋಸ ಏನೂ ಇಲ್ಲ. ಈ ಯಂತ್ರಗಳನ್ನು Tamper ಮಾಡಲಿಕ್ಕೆ ಸಾಧ್ಯವಿಲ್ಲ. ಈಗಷ್ಟೇ ಅದರ ಡೆಮೋ ನೋಡಿದಿರಲ್ಲ”.

"ನೋಡಿ, ನಮ್ಮ ರಾಜಕಾರಿಣಿಗಳೇ ಈ ಮಷೀನ್ ಗಳನ್ನು ಚುನಾವಣೆಯಲ್ಲಿ ಉಪಯೋಗಿಸಲು ಒಪ್ಪಿಕೊಂಡಿಲ್ಲ. ನೀವು ಹೇಗೆ ಸಾರ್ ಒಪ್ಪಿಕೊಂಡಿರಿ ಈ ಮಷೀನ್ ಗಳನ್ನು ಉಪಯೋಗಿಸಲಿಕ್ಕೆ?" ಎಂದು ಅವರು ನನ್ನನ್ನು ದಬಾಯಿಸಿದರು. ಅವನ ಮಾತು ನಿಜವೇ ಆಗಿತ್ತು. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗಲೇ, ಈ ಯಂತ್ರಗಳನ್ನು ಬಿ ಇ ಎಲ್ ಮತ್ತು ಈ ಸಿ ಐ ಎಲ್, ಹೈದರಾಬಾದ್ ಸಂಸ್ಥೆಯವರು ತಯಾರಿ ಮಾಡಿಟ್ಟಿದ್ದರೂ, ವಿರೋಧ ಪಕ್ಷದವರ ವಿರೋಧದಿಂದ, ಲೋಕಸಭೆ ಅಥವಾ ಯಾವುದೇ ರಾಜ್ಯ ವಿಧಾನಸಭಾ ಚುನಾವಣೆ ಗಳಲ್ಲಿ ಈ ಯಂತ್ರಗಳನ್ನು 1998 ರ ತನಕ ಉಪಯೋಗಿಸಿರಲಿಲ್ಲ. ನಟರಾಜನ್ ಅವರ ಪ್ರಶ್ನೆಗೆ, ನಾನು "ಬಹುಶಃ ರಾಜಕಾರಿಣಿಗಳಿಗೆ ಈ ಯಂತ್ರದ ಬಗೆಗೆ ತಿಳುವಳಿಕೆ ಇರಲಿಕ್ಕಿಲ್ಲ" ಎಂದು ಉತ್ತರಿಸಿದೆ. ಅದಕ್ಕೆ ಅವರು, "ಏನ್ರೀ ಹೇಳ್ತೀರಾ, ನಮ್ಮನ್ನು ಆಳುವ ರಾಜಕಾರಿಣಿಗಳಿಗೆ ಬುದ್ದಿ ಇಲ್ಲವೇನ್ರಿ? ಅದ್ಯಾಗೆ ಈ ಮಷೀನ್ ಉಪಯೋಗಿಸಿ ಎಲೆಕ್ಷನ್ ಮಾಡ್ತಿರೋ ನೋಡ್ತೀನಿ" ಎಂದು ಕೂಗಾಡುತ್ತಾ ಜಾಗ ಖಾಲಿಮಾಡಿದರು.
ಹೀಗೆ, ಒಂದಿಬ್ಬರು ಮತ ಯಂತ್ರಗಳ ಬಗೆಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಇನ್ನೂ ಕೆಲವರು, ಈ ಯಂತ್ರಗಳಿಂದ ತಮಗೆ ಮೋಸ ಆಗಬಹುದು ಎಂದು ಭಾವಿಸಿದ್ದರು. ಆದರೆ, ಹೆಚ್ಚಿನ ಅಭ್ಯರ್ಥಿಗಳು ಈ ಯಂತ್ರಗಳನ್ನು ಉಪಯೋಗಿಸಲು ತಮ್ಮ ಒಲವು ತೋರಿಸಿದ್ದರಿಂದ, ಚುನಾವಣೆಗೆ ಮತದಾನ ಯಂತ್ರಗಳನ್ನು ಉಪಯೋಗಿಸಲು ನಿರ್ಧರಿಸಲಾಯಿತು.

ಚುನಾವಣೆಯ ದಿನವೂ ಬಂತು. ನಮಗೆ ಡೆಮೋ ತೋರಿಸಿದ್ದ, ಬಿ ಇ ಎಲ್ ನ ಅದೇ ಮ್ಯಾನೇಜರ್ ತಮ್ಮ ಸಹಾಯಕರೊಬ್ಬರ ಜೊತೆಯಲ್ಲಿ ಮತ ಯಂತ್ರಗಳೊಂದಿಗೆ ನಿಗಧಿತ ಸಮಯಕ್ಕೆ ಹಾಜರಾದರು. ಮತದಾನ ಪ್ರಾರಂಭವಾಗುವುದಕ್ಕೆ ಮುಂಚೆ, ಯಂತ್ರಗಳಲ್ಲಿ ಈ ಹಿಂದೆ ಸಂಗಹಿಸಲಾಗಿದ್ದ ದತ್ತಾಂಶವನ್ನು ಅಳಿಸಿಹಾಕಿದರು. ಎಲ್ಲಾ ಅಭ್ಯರ್ಥಿಗಳಿಗೂ ಇದನ್ನು ತೋರಿಸಲಾಯಿತು. ಮತದಾನ ಪ್ರಾರಂಭವಾಯಿತು. ಮೊದಲ ಭಾರಿಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಉಪಯೋಸುತ್ತಿದ್ದುದ್ದರಿಂದ, ಎಲ್ಲರಿಗೂ ಈ ಚುನಾವಣೆಯ ಬಗೆಗೆ ಕುತೂಹಲವಿತ್ತು. ಹಾಗಾಗಿ, ಈ ಹಿಂದಿನ ಚುನಾವಣೆಗಳಿಗಿಂತಲೂ, ಈ ಚುನಾವಣೆಗೆ ಹೆಚ್ಚಿನ ಮತದಾರರು ತಮ್ಮ ಮತ ಚಲಾಯಿಸಲು ಆಗಮಿಸಿದ್ದರು. ಮತದಾನ ಮುಗಿದ ಮೇಲೆ ಎಣಿಕೆ ಪ್ರಾರಂಭವಾಯಿತು. ಕೇವಲ ಹತ್ತು ನಿಮಿಷಗಳಲ್ಲಿ ಚುನಾವಣಾ ಫಲಿತಾOಶವನ್ನು ಪ್ರಕಟಿಸಲಾಯ್ತು (ಮತ ಪತ್ರಗಳನ್ನು ಉಪಯೋಗಿಸಿದ್ದರೆ, ಎಣಿಕೆ ಪ್ರಕ್ರಿಯೆಗೆ 2 ರಿಂದ 3 ಘಂಟೆಗಳು ಬೇಕಾಗುತ್ತಿತ್ತು)! ಮೊದಲ ಭಾರಿಗೆ ಕುಲಗೆಟ್ಟ (invalid votes) ಮತಗಳ ಸಂಖ್ಯೆ ಸೊನ್ನೆಯಾಗಿತ್ತು. ಮರು ಎಣಿಕೆಯ ಸಮಸ್ಯೆಯೂ ಇರಲಿಲ್ಲ. ಮತದಾನ ಪತ್ರಗಳ (Ballot Papers) ಮುದ್ರಣ ಖರ್ಚು ಸಹಾ ಉಳಿಯಿತು. ಮತ್ತೊಂದು ವಿಶೇಷವೆಂದರೆ, ಮತ ಯಂತ್ರಗಳನ್ನು ವಿರೋಧಿಸುತ್ತಿದ್ದ ಅಭ್ಯರ್ಥಿಗಳೇ, ಈ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆದ್ದಿದ್ದರು. ಇದರಿಂದ, ಎಲ್ಲರಿಗೂ ಈ ಯಂತ್ರಗಳ ಬಗೆಗೆ ನಂಬಿಕೆ ಬಂತು. ಗೆದ್ದವರ ಪೈಕಿ ನಮ್ಮ ನಟರಾಜನ್ ಸಹಾ ಒಬ್ಬರು! ಅವರು ನನ್ನ ಬಳಿಗೆ ಬಂದು, "ಸಾ.....ರ್, ತುಂಬಾ ಚೆನ್ನಾಗಿ ಎಲೆಕ್ಷನ್ ಮಾಡಿದ್ರಿ. ನಾಳೆ ಸ್ವೀಟ್ ಕಳ್ಸ್ತೀನಿ. ಸ್ವೀಕರಿಸಿ. ಥಾಂಕ್ಯೂ ಸಾರ್" ಎಂದು ಇನ್ನೂ ಏನೇನೋ ಬಡಬಡಿಸಿ, ನನ್ನ ಕೈ ಕುಲುಕಿ, ಗೆದ್ದ ಇತರ ಅಭ್ಯರ್ಥಿಗಳ ಜೊತೆ ಹೊರ ನಡೆದರು.

Thus, the saga of Electronic Voting Machine started in our company. ಅಲ್ಲಿಂದೀಚೆಗೆ, ವಿದ್ಯುನ್ಮಾನ ಮತ ಯಂತ್ರಗಳನ್ನು ಉಪಯೋಗಿಸಿ ಯಾವುದೇ ಸಮಸ್ಯೆಯಿಲ್ಲದೇ ಹಲವಾರು ಚುನಾವಣೆಗಳನ್ನು ನಡೆಸಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಸಮಗ್ರತೆ (integrity) ಯ ಬಗೆಗೆ ಹಲವಾರು ರಾಜಕೀಯ ನಾಯಕರು ತಮ್ಮ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಮೇರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿಯೂ ಸಹಾ ಈ ಯಂತ್ರಗಳಲ್ಲಿನ ಮಾಯಿತಿಯನ್ನು ಅಕ್ರಮವಾಗಿ ತಿದ್ದಲಿಕ್ಕೆ (tampering) ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತ ವಾಗಿದೆ. ಬಹುಶಃ ಈ ವಿವಾದಗಳು ಹೀಗೇ ಮುಂದುವರೆದರೆ, ಮುಂದೊಂದು ದಿನ, ಈ ಯಂತ್ರಗಳ ಬದಲಿಗೆ ಮತ ಪತ್ರಗಳನ್ನೇ ಉಪಯೋಗಿಸುವ ದಿನಗಳು ಬರಬಹುದು. ಕಾದು ನೋಡೋಣ!

Post has attachment
೧೯೮೫-೮೬ ರ ಸಮಯ. ಆಗ ಯು ವಿ ಸಿ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದೆನು. ನಮ್ಮ ಕಾಲೇಜು ಹಾಸ್ಟೆಲ್ ನಲ್ಲಿ ವೆಂಕಟೇಶ ಹಂಚಟೆ ಎಂಬ ಬೆಳಗಾವಿ ಕಡೆಯ ಮರಾಠಿ ವಿದ್ಯಾರ್ಥಿಯೊಬ್ಬನಿದ್ದನು. ಅವನು ನಮಗಿಂತಲೂ ಒಂದು ವರ್ಷ ಚಿಕ್ಕವನಾಗಿದ್ದನು. ನಮ್ಮ ಜೊತೆ ಕ್ರಿಕೆಟ್ ಆಡಲಿಕ್ಕೆ ಸಹಾ ಬರುತ್ತಿದ್ದುದ್ದರಿಂದ ನನಗೆ ಚೆನ್ನಾಗಿಯೇ ಪರಿಚಯವಿತ್ತು. ಇವನ ತಂದೆಯವರು, ಬೆಳಗಾವಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಡ್ರೈವರ್ ಆಗಿದ್ದರು. ಎರಡು ದಿನಗೊಳಿಗೊಮ್ಮೆ ಬೆಂಗಳೂರಿಗೆ ಬರುತ್ತಿದ್ದ ಇವರು, ವಿಶ್ರಾಂತಿ ಪಡೆಯಲು ವೆಂಕಟೇಶ ಹಂಚಟೆ ರೂಮಿಗೆ ಬರುತ್ತಿದ್ದರು. ಬರುವಾಗ, ವಾರದಲ್ಲಿ ಒಂದೆರಡು ಬಾರಿ ತಮ್ಮ ಮಗನಿಗೆ ಒಣಗಿದ ಜೋಳದ ಗಟ್ಟಿ ರೊಟ್ಟಿ ಮತ್ತು ಒಂದೆರಡು ವಿಧದ ಚಟ್ನಿ ಪುಡಿಯನ್ನು ತರುತ್ತಿದ್ದರು. ನಾವು ಹಂಚಟೆ ಯವರ ರೂಮಿಗೆ ಯಾವಾಗಲಾದರೊಮ್ಮೆ ಹೋದಾಗ ಅವನು ಚಟ್ನಿ ಪುಡಿಗಳ ಜೊತೆಗೆ ರೊಟ್ಟಿಗಳನ್ನು ತಿನ್ನಲು ಕೊಡುತ್ತಿದ್ದನು. ಜೋಳದ ರೊಟ್ಟಿ ನನಗೆ ಮೊದಲ ಬಾರಿಗೆ ಪರಿಚಯವಾದದ್ದು ಹೀಗೆ.

ವಿದ್ಯಾಭ್ಯಾಸ ಮುಗಿದು ಕೆಲಸಕ್ಕೆ ಸೇರಿದ ಮೇಲೆ, ವೆಂಕಟೇಶ ಹಂಚಟೆಯ ಸಂಪರ್ಕವೂ ಕಡಿದು ಹೊಯ್ತು. ಆಗಿನ ಕಾಲದಲ್ಲಿ, ಈಗಿನಂತೆ ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುತ್ತಿರಲಿಲ್ಲ. ಹಾಗಾಗಿ, ಜೋಳದ ರೊಟ್ಟಿ ಮರೆತೇ ಹೋಗಿತ್ತು. ಸುಮಾರು ೧೯೯೫ ಸಮಯದಲ್ಲಿ, ಆಫೀಸ್ ಕೆಲಸದ ಮೇಲೆ ಗುಲ್ಬರ್ಗ ಸರ್ಕಾರಿ ಪಾಲಿಟೆಕ್ನಿಕ್ ಗೆ ಭೇಟಿ ಇಟ್ಟಾಗ, ಊಟದ ಸಮಯದಲ್ಲಿ, ಅಲ್ಲಿನ ಪ್ರೊಫೆಸರ್ ಒಬ್ಬರು (ಬಹುಶಃ ಅವರ ಹೆಸರು ಮಹಾಲಿಂಗಂ ಅಂತಾ ಕಾಣಿಸುತ್ತದೆ. ಕಪ್ಪು ಬಣ್ಣದ ಕುಳ್ಳಗಿನ ವ್ಯಕ್ತಿ), "ಬನ್ನಿ, ನಿಮಗೆ ಖಡಕ್ ಜೋಳದ ರೊಟ್ಟಿಯ ಊಟ ಕೊಡಿಸುತ್ತೇನೆ" ಎಂದು ಹೇಳಿ ಹತ್ತಿರದ ಖಾನಾವಳಿಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ, ಆಗ ತಾನೇ ಮಾಡಿದ್ದ, ಮೆತ್ತನೆಯ ಬಿಸಿ ಬಿಸಿ ಜೋಳದ ರೊಟ್ಟಿ (ನಮ್ಮ ವೆಂಕಟೇಶ ಹಂಚಟೆಯ ರೊಟ್ಟಿಗಳು ಯಾವಾಗಲೂ ಗಟ್ಟಿಯಾಗಿದ್ದು ತಿನ್ನಲು ಸ್ವಲ್ಪ ಕಷ್ಟ ಪಡಬೇಕಿತ್ತು!), ಅದರ ಮೇಲೆ ಒಂದಿಷ್ಟು ಬೆಣ್ಣೆ, ಒಂದೆರಡು ತರಕಾರಿ ಪಲ್ಯಗಳು (ಬದನೆಕಾಯಿಯ ಎಣ್ಣೆಗಾಯಿ ಜೊತೆ ಮತ್ತೊಂದು ಪಲ್ಯ) , ಶೇಂಗಾ (ಕಡಲೇಕಾಯಿ) ಮತ್ತು ಗುರೆಳ್ಳು (ಹುಚ್ಚೆಳ್ಳು) ಪುಡಿಗಳು, ಒಂದೆರಡು ಈರುಳ್ಳಿ ಚೂರುಗಳು, ಮೆಂತ್ಯ ಸೊಪ್ಪು, ಮೊಸರು, ಮಜ್ಜಿಗೆ ಹಾಗೂ ಉಪ್ಪಿನ ಕಾಯಿ - ಇಷ್ಟು ಪದಾರ್ಥಗಳನ್ನು ಬಡಿಸಲಾಗಿತ್ತು. ನನ್ನ ಜೊತೆಗಿದ್ದ ನನ್ನ ಸಹೋದ್ಯೋಗಿಗಳೂ ಸಹಾ ಜೋಳದ ರೊಟ್ಟಿಯ ಊಟವನ್ನು ತುಂಬಾ ಇಷ್ಟಪಟ್ಟು ಸವಿದರು. ನನ್ನ ತಟ್ಟೆಯಲ್ಲಿ, ಶೇಂಗಾ ಪುಡಿ ಖಾಲಿಯಾಗಿತ್ತು. ಅದನ್ನು ನೋಡಿ ನಮ್ಮ ಪ್ರೊಫೆಸರ್, ಹೋಟೆಲ್ ನ ಹುಡುಗನನ್ನು ಕರೆದು, "ಸಾರ್ ಗೆ ಸ್ವಲ್ಪ ಹಿಂಡಿ ಹಾಕೋ!" ಎಂದರು. ಹಿಂಡಿ ಹೆಸರು ಕೇಳಿ ಸ್ವಲ್ಪ ಗಾಬರಿಯಾಯ್ತು. ಹಿಂಡಿಯನ್ನು ನಮ್ಮ ಕಡೆ ಹಸು ಮತ್ತು ಎಮ್ಮೆಗಳಿಗೆ ಹಾಕುತ್ತಾರೆ! ಆನಂತರ ಗೊತ್ತಾಯ್ತು, ‘ಉತ್ತರ ಕರ್ನಾಟಕದವರು, ಚಟ್ನಿ ಪುಡಿಯನ್ನು ಹಿಂಡಿ ಎಂದು ಕರೆಯುತ್ತಾರೆ’ ಎಂದು!

ಮುಂದೆ ೧೯೯೭ ರಲ್ಲಿ ಉತ್ತರ ಕರ್ನಾಟಕ ಮೂಲದ ಹುಡುಗಿಯ ಜೊತೆ ಮದುವೆಯಾದ ಮೇಲೆ ಜೋಳದ ರೊಟ್ಟಿ ನನಗೆ ತುಂಬಾ ಹತ್ತಿರವಾಯ್ತು. ಮನೆಯಲ್ಲೇ, ಆಗೊಮ್ಮೆ ಈಗೊಮ್ಮೆ ಜೋಳದ ರೊಟ್ಟಿಯನ್ನು ಮಾಡುತ್ತಿದ್ದೆವು. ಇಷ್ಟರಲ್ಲಿ, ಬೆಂಗಳೂರಿನಲ್ಲಿಯೂ ಜೋಳದ ರೊಟ್ಟಿ ಹೋಟೆಲ್ ಗಳು ಪ್ರಾರಂಭವಾದುವು. ಗಾಂಧೀ ನಗರದ ಕಾಮತ್ ಯಾತ್ರಿನಿವಾಸ್ (ಸಪ್ನಾ ಪುಸ್ತಕ ಮಳಿಗೆಯ ಸಮೀಪ), ಬುಲ್ ಟೆಂಪಲ್ ರಸ್ತೆಯಲ್ಲಿರುವ ಕಾಮತ್ ಬ್ಯುಗಲ್ ರಾಕ್ (ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜು ಸಮೀಪ) ಮತ್ತು ಮೈಸೂರು ರಸ್ತೆಯಲ್ಲಿರುವ ನಾಗೇಗೌಡರ ಜಾನಪದ ಲೋಕದ ಪಕ್ಕದಲ್ಲಿರುವ ಕಾಮತ್ ಹೋಟೆಲ್ ಮುಖ್ಯವಾದವು. ಯಾವಾಗಲಾದರೊಮ್ಮೆ, ಈ ಹೋಟೆಲ್ ಗಳಿಗೆ ಹೋಗಿ ಜೋಳದ ರೊಟ್ಟಿಯ ಊಟ ಮಾಡಿ ಬರುತ್ತಿದ್ದೆವು. ಎಷ್ಟೋ ಬಾರಿ ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಜಾನಪದ ಲೋಕದ ಕಾಮತ್ ಲೋಕ ರುಚಿಯಲ್ಲಿ ಜೋಳದ ರೊಟ್ಟಿಯ ಊಟ ಮಾಡಿದ್ದೇವೆ. ಮುಂದೆ, ೨೦೦೬ ರಲ್ಲಿ ನಮ್ಮ ಸ್ವಂತ ಮನೆಯನ್ನು ಕಟ್ಟುವಾಗ, ಉತ್ತರ ಕರ್ನಾಟಕದ ಕಡೆಯವರೇ ನಮಗೆ ವಾಚ್ ಮ್ಯಾನ್ ಆಗಿ ಸಿಕ್ಕಿದರು. ಕೆಲವೊಮ್ಮೆ, ನಮ್ಮ ವಾಚ್ ಮ್ಯಾನ್ ಹೆಂಡತಿ ನಮ್ಮ ಮನೆಗೆ ಬಂದು ಜೋಳದ ರೊಟ್ಟಿ ಮತ್ತು ಪಲ್ಯಗಳನ್ನು ಮಾಡಿಕೊಡುತ್ತಿದ್ದಳು. ಈಗಲೂ ಸಹಾ, ನಮ್ಮ ನೆರೆಹೊರೆಯವರಾಗಿ, ಉತ್ತರ ಕರ್ನಾಟಕದ ಕಡೆಯ ಒಂದೆರಡು ಕುಟುಂಬಗಳು ವಾಸಿಸುತ್ತಿವೆ. ಇವರು ಒಮ್ಮೊಮ್ಮೆ ನಮ್ಮ ಮನೆಗೆ ಬಂದು ಜೋಳದ ರೊಟ್ಟಿಯನ್ನು ಮಾಡಿಕೊಡುತ್ತಾರೆ. ಹೀಗೆ, ಸುಮಾರು ಇಪ್ಪತ್ತೈದು - ಮೂವತ್ತು ವರ್ಷಗಳ ಹಿಂದೆ ಕೇವಲ ಬಾಯಿ ಚಪಲಕ್ಕೆಂದು ಪ್ರಾರಂಭಿಸಿದ ಆಹಾರ ಪದಾರ್ಥವೊಂದು, ನನ್ನ ಮುಖ್ಯ ಆಹಾರ ವಾಹಿನಿಯಲ್ಲೊಂದಾದದ್ದು ಬಹು ಸೋಜಿಗದ ಸಂಗತಿಯೇ ಸರಿ!

Photo

Post has attachment

1979 ರ ಬೇಸಿಗೆಯ ದಿನಗಳು. 9ನೇ ತರಗತಿಯ ಪರೀಕ್ಷೆಗಳು ಮುಗಿದಿದ್ದವು. ಪರೀಕ್ಷೆಗಳು ಮುಗಿದ ಮೇಲೂ, ಒಂದು ವಾರ ತರಗತಿಗಳಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಹಾಗಾಗಿ, ಸುಮ್ಮನೆ ಶಾಲೆಗೆ ಬಂದು ಹೋಗುತ್ತಿದ್ದೆವು. ಒಂದು ದಿನ, ಲಕ್ಷ್ಮಣ ಸ್ವಾಮಿ ಎಂಬ ಹಿಂದಿ ಮಾಸ್ತರರೊಬ್ಬರು ನಮ್ಮ ತರಗತಿಗೆ ಬಂದರು. ಪರೀಕ್ಷೆಗಳೆಲ್ಲಾ ಮುಗಿದಿದ್ದುದರಿಂದ, ಕಾಲಹರಣ ಮಾಡಲು ಏನೇನೋ ವಿಷಯದ ಬಗೆಗೆ ಚರ್ಚಿಸಿದೆವು. ಕಡೆಗೆ ನಮ್ಮ ಚರ್ಚೆ ಸಿನಿಮಾ ಕಡೆ ಹೊರಳಿತು. ಲಕ್ಷ್ಮಣ ಸ್ವಾಮಿ ಯವರಿಗೆ ಹಿಂದಿ ಗೊತ್ತಿದ್ದುದ್ದರಿಂದ, ಸಾಕಷ್ಟು ಹಿಂದಿ ಸಿನಿಮಾಗಳನ್ನು ನೋಡಿದ್ದರು. "ಬಚ್ಚನ್ ನೋಡಿ ಎ೦ತಹ ಒಳ್ಳೆಯ ನಟ. ಎಂಥೆಂಥ ಒಳ್ಳೆಯ ಸಿನಿಮಾಗಲ್ಲಿ ಅವರು ನಟಿಸಿದ್ದಾರೆ" ಎಂದು ಅವರು ಸಿನಿಮಾ ಬಗೆಗೆ ಚರ್ಚಿಸುತ್ತಾ ಹೇಳಿದರು. ಅಮಿತಾಬ್ ಬಚ್ಚನ್ ಅವರ ಶೋಲೆ, ಅಮರ್ ಅಕ್ಬರ್ ಅಂಥೋನಿ, ಡಾನ್ ಮುಂತಾದ ಚಿತ್ರಗಳು ಆ ದಿನಗಳಲ್ಲಿ ಬಿಡುಗಡೆಯಾಗಿ ಬಹಳ ಯಶಸ್ಸು ಕಂಡಿದ್ದವು. ನಮ್ಮ ತರಗತಿಯಲ್ಲಿ, ಹಿಂದಿ ಸಿನಿಮಾ ನೋಡುವವರ ಸಂಖ್ಯೆ ತೀರಾ ಕಡಿಮೆಯಿತ್ತು. ಉರ್ದು ಅಥವಾ ಹಿಂದಿ ಬರುತ್ತಿದ್ದ ಕೆಲವೇ ಕೆಲವು ಸ್ನೇಹಿತರು ಮಾತ್ರ ಹಿಂದಿ ಸಿನಿಮಾ ನೋಡುತ್ತಿದ್ದರು. ನಾವು, ಈ ಸ್ನೇಹಿತರಿಂದ ಹಿಂದಿ ಸಿನೆಮಾಗಳ ಕಥೆಗಳನ್ನು ಕೇಳಿ ಆನಂದಿಸುತ್ತಿದ್ದೆವು ಅಷ್ಟೇ. ಪರಭಾಷಾ ನಟನೊಬ್ಬನನ್ನು ಹೊಗಳಿದ್ದು ನಮಗೆ ಇಷ್ಟವಾಗಲಿಲ್ಲ. ನಮ್ಮ ಸ್ನೇಹಿತನೊಬ್ಬನು, "ಹೌದು ಸಾರ್, ಕನ್ನಡದಲ್ಲಿ ರಾಜ್ ಕುಮಾರ್ ಇದ್ದ ಹಾಗೆ ಹಿಂದಿಯಲ್ಲಿ ಬಚ್ಚನ್" ಎಂದು ಜೋರಾಗಿ ಕೂಗಿದ. ನಮ್ಮ ಮಾಸ್ತರರಿಗೆ ಇದು ಇಷ್ಟವಾಗಲಿಲ್ಲ ಅಂಥಾ ಕಾಣಿಸುತ್ತದೆ. "ನಿಮ್ಮ ರಾಜಕುಮಾರ ಯಾವ ಮಹಾ ನಟ" ಎಂದು ಬಿಟ್ಟರು. ಈ ಮಾತು ಕೇಳಿ ಹಲವಾರು ವಿದ್ಯಾರ್ಥಿಗಳಿಗೆ ಸಿಟ್ಟು ಬಂತು. ನಮ್ಮಲ್ಲಿ ಷಣ್ಮುಖ ಎಂಬ ವಿದ್ಯಾರ್ಥಿಯೊಬ್ಬನಿದ್ದನು. ಅವನು, ರಾಜ್ ಕುಮಾರರ ಕಟ್ಟಾ ಅಭಿಮಾನಿಯಾಗಿದ್ದನು. ಅವನು ಎದ್ದು ನಿಂತು ಟೇಬಲ್ ಗುದ್ದಿ,
"ಏನ್ಸಾರ್, ರಾಜ್ ಕುಮಾರರ ಬಗೆಗೆ ಅಷ್ಟೊಂದು ಹಗುರವಾಗಿ ಮಾತನಾಡುತ್ತಿದ್ದೀರಾ? ಅವರ ‘ಮಯೂರ’ ಚಿತ್ರವನ್ನು ನೋಡಿದ್ದೀರಾ? ಹೇಗಿದೆ ಅವರ ಅಭಿನಯ?" ಎಂದು ಸವಾಲು ಹಾಕಿದ.

ಅದಕ್ಕೆ ನಮ್ಮ ಮಾಸ್ತರರು "ಮಯೂರ ಚಿತ್ರದಲ್ಲಿ, ನಿಮ್ಮ ರಾಜ ಕುಮಾರ, ಒಬ್ಬ ರಾಜಕುಮಾರನ ಪಾತ್ರ ಮಾಡಿದ್ದಾನೆ. ತುಂಬಾ ಗಂಭೀರವಾಗಿರಬೇಕಾದ ಪಾತ್ರ. ಆದರೆ, ನಿಮ್ಮ ನಾಯಕ ನಟ, ಅಲ್ಲೊಮ್ಮೆ ಇಲ್ಲೊಮ್ಮೆ ಗಾಂಭೀರ್ಯ ಬಿಟ್ಟು ನಟನೆ ಮಾಡಿದ್ದಾನೆ“ಎಂದರು. ಷಣ್ಮುಖನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ತನ್ನ ನೆನಪಿನ ಮೂಸೆಯಿಂದ ಡಾ. ರಾಜ್ ಅಭಿನಯದ ಹಲವಾರು ಚಿತ್ರಗಳ ಹೆಸರುಗಳನ್ನು ಹೇಳಿದನು. ಸನಾದಿ ಅಪ್ಪಣ್ಣ, ಶಂಕರ್ ಗುರು, ಬಬ್ರುವಾಹನ, ಹುಲಿಯ ಹಾಲಿನ ಮೇವು, ಪ್ರೇಮದ ಕಾಣಿಕೆ, ಗಂಧದ ಗುಡಿ ಇತ್ಯಾದಿ. ನಮ್ಮ ಮಾಸ್ತರರು ಈ ಯಾವ ಚಿತ್ರಗಳಲ್ಲಿಯೂ ರಾಜ್ ಕುಮಾರರ ಅಭಿನಯ ಚೆನ್ನಾಗಿದೆ ಎಂದು ಒಪ್ಪಿಕೊಳ್ಳಲೇ ಇಲ್ಲಾ. ಆಶ್ಚರ್ಯವೆಂದರೆ, ನಮ್ಮ ಮಾಸ್ತರರು ಈ ಎಲ್ಲಾ ಸಿನಿಮಾಗಳನ್ನು ನೋಡಿದ್ದರು ಎಂದು ಅನಿಸುತ್ತದೆ. (ಆ ಕಾಲದಲ್ಲಿ ಟಿ ವಿ ಮತ್ತು ಕಂಪ್ಯೂಟರ್ ಗಳು ಇರಲಿಲ್ಲ. ಸಿನಿಮಾ ನೋಡಲಿಕ್ಕೆ ಥೀಯೇಟರ್ ಗೇ ಹೋಗಬೇಕಿತ್ತು!) ಕಡೆಗೆ 'ಬಂಗಾರದ ಮನುಷ್ಯ' ಚಿತ್ರದಲ್ಲಿನ ರಾಜ್ ಅಭಿನಯವನ್ನೂ ಸಹಾ ನಮ್ಮ ಮಾಸ್ತರರು ಚೆನ್ನಾಗಿದೆ ಎಂದು ಒಪ್ಪಿಕೊಳ್ಳಲಿಲ್ಲ. ‘ಬಂಗಾರದ ಮನುಷ್ಯ’ ಚಿತ್ರಕ್ಕಿಂತಲೂ ಉತ್ತಮವಾದ ಸಿನೆಮಾವನ್ನು ಉದಾಹರಿಸಲು ನಮಗೆ ಸಾಧ್ಯವಾಗಲಿಲ್ಲ. ಮಾಸ್ತರರು ಪಕ್ಷಪಾತಿಗಳು ಅನ್ನಿಸಿತು. ಕೊನೆಯ ಪಕ್ಷ, ಡಾ. ರಾಜ್ ಅವರ ಒಂದೆರಡು ಸಿನಿಮಾ ಗಳ ಅಭಿನಯವನ್ನಾದರೂ ಚೆನ್ನಾಗಿದೆ ಎಂದು ಅವರು ಒಪ್ಪಿಕೊಳ್ಳಬಹುದಿತ್ತು. ಮಾಸ್ತರರ ಜೊತೆ ವಾದ ಮುಂದುವರೆಸಲು ನಮಗಾರಿಗೂ ಇಷ್ಟವಾಗಲಿಲ್ಲ. ನಮ್ಮ ಷಣ್ಮುಖ ಸಹಾ ಪೆಚ್ಚು ಮೋರೆ ಹಾಕಿಕೊಂಡು ತೆಪ್ಪಗೆ ಕುಳಿತ. ಮೊದಲ ಬಾರಿಗೆ, ನಮ್ಮ ಮಾಸ್ತರರು ಬಹು ದೊಡ್ಡ ‘ಖಳನಾಯಕ' ನಂತೆ ಕಂಡರು. ಅದೇ ಸಮಯಕ್ಕೆ ಪಿರಿಯಡ್ ಮುಗಿಯಿತೆoದು ಸೂಚಿಸಲು ಸ್ಕೂಲ್ ಬೆಲ್ ಹೊಡೆಯಿತು. ಮಾಸ್ತರರು, ಸೀಮೆಸುಣ್ಣ ಮತ್ತು ಡಸ್ಟರ್ ತೆಗೆದುಕೊಂಡು "OK, my dear students, see you again. Bye” ಎಂದು ಹೊರಟರು. ನಾವ್ಯಾರು ಮಾಸ್ತರರ ಕಡೆಗೆ ನೋಡುವ ಆಸಕ್ತಿಯನ್ನೇನೂ ತೋರಿಸಲಿಲ್ಲ. ಮಾಸ್ತರರು ಬಾಗಿಲಿನ ಹತ್ತಿರ ಬಂದು, ನಮಗೆಲ್ಲರಿಗೂ ಮತ್ತೆ "ಓಕೆ. ಬೈ ಸ್ಟೂಡೆಂಟ್ಸ್" ಎಂದರು. ಅದಕ್ಕೂ ನಾವ್ಯಾರು ಪ್ರತಿಕ್ರಿಯಸಲಿಲ್ಲ. ಅವರೇ ತಮ್ಮ ಮಾತನ್ನು ಮುಂದುವರೆಸಿ, “Thank you for participating actively in a lively discussion. Your Rajakumara is a real Rajakumaara. A great artist! ಆ ನಟನ ಬಗೆಗೆ ನಿಮಗಿರುವ ಅಭಿಮಾನವನ್ನು ತಿಳಿಯಲು ಹೀಗೆ ಸಣ್ಣದೊಂದು ನಾಟಕ ಮಾಡಿದೆ, ಅಷ್ಟೇ! All the best. Bye” ಎಂದು ಹೇಳಿ ನಮ್ಮ ಪ್ರತಿಕ್ರಿಯೆಗೂ ಕಾಯದೇ ತರಗತಿಯಿಂದ ಬಿರಬಿರನೆ ಹೊರ ನಡೆದರು.

ಈ ಘಟನೆ ನಡೆದು ಸುಮಾರು ಮೂವತ್ತೈದು ವರ್ಷಗಳೇ ಕಳೆದಿವೆ. ಲಕ್ಷ್ಮಣಸ್ವಾಮಿಯವರು ಮೂಲತಃ ಎಲೆಕ್ಟ್ರಿಕಲ್ ಇಂಜಿನಿಯರ್. ಹಿಂದಿಯಲ್ಲಿಯೂ ಪದವಿಯನ್ನು ಪಡೆದಿದ್ದರಂತೆ. ಆ ದಿನಗಳಲ್ಲಿ, ನಮ್ಮ ಹೈ ಸ್ಕೂಲ್ ನಲ್ಲಿ ಸುಲೋಚನಾ ಸಾವಂತ್ ಎಂಬ ಒಬ್ಬರೇ ಹಿಂದಿ ಮಾಸ್ತರರು ಇದ್ದರು. ಇವರಿಗೆ ದಿನದಲ್ಲಿ ಒಂದು ಪೀರಿಯಡ್ ಕೂಡಾ ಬಿಡುವಿರುತ್ತಿರಲಿಲ್ಲ. ಇವರ ಸಹಾಯಕ್ಕೆ ಮತ್ತೊಬ್ಬ ಮಾಸ್ತರರನ್ನು ನೇಮಕ ಮಾಡಿಕೊಳ್ಳಲೇ ಬೇಕು ಎಂದು ಸ್ಕೂಲ್ ಆಡಳಿತ ಮಂಡಳಿಯು ಬಹಳ ದಿನಗಳ ಹುಡುಕಾಟದ ನಂತರ ಸಿಕ್ಕವರೇ Engineer turned Hindi Master - ಈ ಲಕ್ಷ್ಮಣ ಸ್ವಾಮಿಯವರು.

ಇವರು ತಾತ್ಕಾಲಿಕವಾಗಿ ನಮ್ಮ ಹೈ ಸ್ಕೂಲ್ ಗೆ ಶಿಕ್ಷಕರಾಗಿ ಬಂದಿದ್ದರೂ, ಅಲ್ಲಿಯೇ ಹಿಂದಿ ಶಿಕ್ಷಕರಾಗಿ ಉಳಿದರು. ಸ್ವತಃ ಇಂಜಿನಿಯರ್ ಆಗಿದ್ದುದ್ದರಿಂದ, ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಬಹಳ ಸೊಗಸಾಗಿ ಪಾಠ ಮಾಡುತ್ತಿದ್ದರು. ೧೦ನೇ ಮತ್ತು ಪಿ ಯು ಸಿ ವಿದ್ಯಾರ್ಥಿಗಳಿಗೆ ಈ ವಿಷಯಗಳಲ್ಲಿ ಮನೆ ಪಾಠ ಪ್ರಾರಂಭಿಸಿ ಸಾಕಷ್ಟು ಹಣವನ್ನು ಸಂಪಾದಿಸಿದರು. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿಯೂ ಸಾಕಷ್ಟು ಪಾಂಡಿತ್ಯವನ್ನು ಸಂಪಾದಿಸಿದ್ದರು. ನಾವು ಹಿಂದಿಯನ್ನು, ಇಂಗ್ಲಿಷ್ ಭಾಷೆಯ ಮುಖಾಂತರ (Learning Hindi Through English) ಕಲಿಯಲಿಕ್ಕೆ ಪ್ರಾರಂಭಿಸಿದ್ದು ಇವರಿಂದಲೇ. ಈಗ ಇವರು ನಮ್ಮೊಂದಿಗಿಲ್ಲ. ಕೆಲವು ವರ್ಷಗಳ ಹಿಂದೆ ತೀರಿಕೊಂಡರಂತೆ. ನಮ್ಮ ಷಣ್ಮುಖ ಈಗ ಮಂಡ್ಯದ ಕಾಲೇಜು ಒಂದರಲ್ಲಿ ಪ್ರೊಫೆಸರ್ ಆಗಿದ್ದಾನೆ. ಡಾ. ರಾಜ್ ಕುಮಾರ್ ಅಥವಾ ಕನ್ನಡ ಚಿತ್ರರಂಗವನ್ನು ನೆನಪು ಮಾಡಿಕೊಂಡಾಗ ಈ ಮೇಲಿನ ಘಟನೆಯ ಜೊತೆಗೆ ನಮ್ಮ ಹೈ ಸ್ಕೂಲ್, ಲಕ್ಷ್ಮಣ ಸ್ವಾಮಿ, ಷಣ್ಮುಖ ಮತ್ತು ಇತರ ವಿದ್ಯಾರ್ಥಿ ಮಿತ್ರರು ನೆನಪಿಗೆ ಬರುತ್ತಾರೆ.
Photo
Wait while more posts are being loaded